ಶೇರ್‍ಷಹ
	ಆಫ್ಘನ್ ಬುಡಕಟ್ಟಿಗೆ ಸೇರಿದ ಸೂರ್‍ವಂಶಿಕ ಸಾಮ್ರಾಜ್ಯ ಸ್ಥಾಪಕ (1540-45). ಪಂಜಾಬಿನ ಬಜಾವಾದ ಎಂಬಲ್ಲಿ ಜನಿಸಿದ. ಇವನ ತಂದೆ ಹಸನ್‍ಸೂರ್. ಈತನ ಮೊದಲ ಹೆಸರು ಫರೀದ್. ಸೈನಿಕನಾಗಿ ದಂಡನಾಯಕನಾಗಿ ದಕ್ಷಾಡಳಿತಗಾರನಾಗಿ ನುರಿತ ರಾಜತಂತ್ರಜ್ಞನಾಗಿ ಖ್ಯಾತನಾದ ಇವನ ಜೀವನ ಬಾಬರನಷ್ಟು ಆಕರ್ಷಕ, ಅಕ್ಬರನಷ್ಟು ಬೋಧಪ್ರದ. ಚಿಕ್ಕಂದಿನಿಂದಲೇ ತನ್ನ ಮಲತಾಯಿಯ ಕಾಟ ತಡೆಯಲಾರದೆ 22ನೆಯ ವಯಸ್ಸಿನಲ್ಲಿ ಜೌನಪುರಕ್ಕೆ ಹೋಗಿ ಅರೇಬಿಕ್, ಪರ್ಷಿಯನ್ ಭಾಷೆ ಕಲಿತು ಅನಂತರ ತಂದೆಯಿಂದ ಸಸ್ಸರಾಂದ ಆಡಳಿತದ ಮೇಲ್ವಿಚಾರಣೆ ನಡೆಸಿದ. ಅನಂತರ ಬಿಹಾರದ ಸ್ವತಂತ್ರದೊರೆ ಬಾಹರ್ ಖಾನ್ ಲೋಹಾಣಿಯ ಸೇವೆಮಾಡಿದ(1522). ಇವನು ಒಮ್ಮೆ ಹುಲಿಯೊಂದನ್ನು ಕೊಂದು ತನ್ನ ಧೈರ್ಯ ಪ್ರದರ್ಶಿಸಿದ್ದರಿಂದ ದೊರೆ ಈತನಿಗೆ ಶೇರ್‍ಖಾನ್ ಎಂಬ ಬಿರುದು ನೀಡಿದ. ಇವನ ಏಳ್ಗೆ ಸಹಿಸದ ಕೆಲವರು ದೊರೆಗೆ ಇವನ ಬಗ್ಗೆ ವಿಷಬೀಜ ಬಿತ್ತಿದರು. ಸೇವೆಯಿಂದ ವಜಾಗೊಂಡ ಮೇಲೆ ಬಾಬರನ ಸೈನ್ಯದಲ್ಲಿ ಸೇವೆಸಲ್ಲಿಸಿ ಬಾಬರನಿಂದ ಸಸ್ಸರಾಂ ಅನ್ನು ಜಹಗೀರಾಗಿ ಪಡೆದುಕೊಂಡ. ಸ್ವಲ್ಪಕಾಲದಲ್ಲೆ ಮೊಗಲರ ಸೇವೆ ತ್ಯಜಿಸಿ ಬಿಹಾರಕ್ಕೆ ಹಿಂತಿರುಗಿ, ಹಿಂದಿನ ಜಲಾಲ್‍ಖಾನನ ಪ್ರತಿನಿಧಿ ಮತ್ತು ಪೋಷಕನಾದ. ಜಲಾಲ್‍ಖಾನ್ ಅಪ್ರಾಪ್ತವಯಸ್ಸಿನ ರಾಜನಾಗಿದ್ದರಿಂದ ಶೇರ್‍ಷಹ ನಿಜವಾದ ಅಧಿಪತಿಯಾದ. ನಾಲ್ಕು ವರ್ಷದ ಅವಧಿಯಲ್ಲಿ ಸೈನಿಕರನ್ನು ತನ್ನ ಕಡೆ ಒಲಿಸಿಕೊಂಡು ಸ್ವತಂತ್ರನಾದ. ಇದೇ ಸಮಯದಲ್ಲಿ ಚುನಾರ ಕೋಟೆ ವಿಧವೆ ರಾಣಿ ಲಾದ್‍ಮಾಲಿಕ್ ಈತನನ್ನು ವಿವಾಹವಾದಳು. ಅನಂತರ ಆರ್ಥಿಕ ಮತ್ತು ಸೈನಿಕ ಸಂಪತ್ತಿನಿಂದ ಸದೃಢನಾದ.

	ಬಂಗಾಲದ ಮಹಮದ್‍ಷಹನ ಬೆಂಬಲ ಪಡೆದು ಬಂದ ಆಫ್ಘನ್ನ ರನ್ನು ಈತ ಸೋಲಿಸಿದ. ಹುಮಾಯೂನನನ್ನು ಗುಜರಾತ್, ಬಂಗಾಲ ಕದನದಲ್ಲಿ ಸೋಲಿಸಿ ಗೌರಪಟ್ಟಣ ವಶಪಡಿಸಿಕೊಂಡ. ವಿಲಾಸ ಮಗ್ನನಾಗಿದ್ದ ಹುಮಾಯೂನನನ್ನು ಸೋಲಿಸಿ ದೆಹಲಿ, ಆಗ್ರಗಳನ್ನು ಆಕ್ರಮಿಸಿಕೊಂಡ(1540). ಅನಂತರ(1540-45) ಅನೇಕ ಕದನಗಳನ್ನು ಮಾಡಿ ಸಾಮ್ರಾಜ್ಯವನ್ನು ವಿಸ್ತರಿಸಿದ. ಗುಡ್ಡಗಾಡು ಜನರನ್ನೂ ರಜಪೂತರನ್ನೂ ಸೋಲಿಸಿದ. ಮಾಲ್ದೇವನನ್ನು ಸೋಲಿಸಿ ಅವನ ಸಾಮ್ರಾಜ್ಯವನ್ನು ವಶಪಡಿಸಿಕೊಂಡ. ಅನಂತರ ಕಾಲೆಂಜರ ಕೋಟೆ ವಶಪಡಿಸಿಕೊಳ್ಳುವಾಗ ಸಿಡಿಮದ್ದಿನ ಆಕಸ್ಮಿಕ ಸ್ಫೋಟನೆಯಿಂದ ಮರಣ ಹೊಂದಿದ (1545 ಮೇ 22).

	ಆಡಳಿತ ಸುಧಾರಣೆಗಳು: ಈತ ಉತ್ತಮ ರಾಜನೀತಿಜ್ಞನೂ ಆಡಳಿತಗಾರನೂ ಆಗಿದ್ದ ಅನೇಕ ಸುಧಾರಣೆÂಗಳನ್ನು ಜಾರಿಗೆ ತಂದು ಜನಮನವನ್ನು ಗೆದ್ದ. ಇವನು 15 ವರ್ಷಗಳ ಕಾಲ ರಾಜ್ಯಭ್ರಷ್ಟನಾಗಿದ್ದು ತನ್ನ 68ನೆಯ ವಯಸ್ಸಿನಲ್ಲಿ ಸಿಂಹಾಸನವೇರಿದ. ಸನಾತನ ಸುನ್ನಿ ಪಂಗಡಕ್ಕೆ ಸೇರಿದ ಈತ ಪರಮತಸಹಿಷ್ಣುವಾಗಿದ್ದ. ಮುಸ್ಲಿಮರು ಮತ್ತು ಹಿಂದುಗಳ ನಡುವೆ ಇದ್ದ ತರತಮವನ್ನು ತೊಡೆದು ಹಾಕಿ ಅರ್ಹತೆಯ ಆಧಾರದ ಮೇಲೆ ಆಡಳಿತಕ್ಕೆ ಅಧಿಕಾರಿಗಳನ್ನು ನೇಮಿಸುವ ಪದ್ಧತಿ ಜಾರಿಗೆ ತಂದ. ಐದು ವರ್ಷಗಳ ಆಡಳಿತದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ಕೈಗೊಂಡ. ಕೇಂದ್ರಾಡಳಿತದಲ್ಲಿ ನಾಲ್ಕು ಜನ ಮಂತ್ರಿಗಳಿದ್ದ ಸಾಮ್ರಾಜ್ಯವನ್ನು ಇಕ್ತ (ಪ್ರಾಂತ್ಯ)ಗಳಾಗಿ, ಇಕ್ತಗಳನ್ನು 47ಸರ್ಕಾರ (ಜಿಲ್ಲೆ)ಗಳಾಗಿ ವಿಂಗಡಿಸಿದ. ಜಿಲ್ಲಾಡಳಿತವನ್ನು ಮುಖ್ಯ ಶೇಕದಾರ್ ಮುನ್ಸಿಫ್‍ಗಳು ನೋಡಿಕೊಳ್ಳುತ್ತಿದ್ದರೆ, ಪರಗಣಗಳ (ತಾಲ್ಲೂಕು) ಆಡಳಿತ ಶೇಕದಾರ್, ಮುನ್ಸಿಫ್, ಅಮೀನ್ ಮತ್ತು ಇಬ್ಬರು ಗುಮಾಸ್ತರು ನೋಡಿಕೊಳ್ಳುತ್ತಿದ್ದರು. ಆಧುನಿಕ ಜಿಲ್ಲಾಧಿಕಾರಿಗಳಂತೆ ಶೇಕದಾರ್ ನ್ಯಾಯಾಲಯದ ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣೆ ಮಾಡುತ್ತಿದ್ದ. ಮುನ್ಸಿಫನು ಪರಗಣದ ಸಾರ್ವಜನಿಕ ಆಡಳಿತ, ಕಂದಾಯ ವಸೂಲಿ ಮಾಡುತ್ತಿದ್ದ. ಅಮೀನ ಎಂಬ ಇಬ್ಬರು ಗುಮಾಸ್ತರಲ್ಲಿ ಒಬ್ಬ ಹಿಂದಿಯಲ್ಲೂ ಮತ್ತೊಬ್ಬ ಪರ್ಷಿಯನ್ ಭಾಷೆಯಲ್ಲೂ ದಾಖಲೆ ಇಡಬೇಕಿತ್ತು. ಗ್ರಾಮಾಡಳಿತವನ್ನು ಪಟವಾರಿ, ಚೌಕೀದಾರ್ ನೋಡಿಕೊಳ್ಳುತ್ತಿದ್ದರು. ಕಂದಾಯ ಸುಧಾರಣೆಗೊಳಿಸಿ ಆದಾಯದ ಮೂರನೆಯ ಒಂದು ಭಾಗ ವಸೂಲಿ ಮಾಡುತ್ತಿದ್ದ. ಸೈನಿಕ ಪದ್ಧತಿ ಸುಧಾರಿಸಿ ದಕ್ಷ ಆಫ್ಘನ್ನರನ್ನು ನೇಮಕಮಾಡಿ ಅಶ್ವದಳಕ್ಕೆ ಆದ್ಯತೆ ನೀಡಿದ. ನ್ಯಾಯಾಡಳಿತ ಸುಧಾರಿಸಿ ನಿಷ್ಪಕ್ಷಪಾತ ನ್ಯಾಯ ವ್ಯವಸ್ಥೆಯನ್ನು ರೂಢಿಸಿದ. ಮುಖ್ಯಖಾಜಿ ನ್ಯಾಯಾಂಗದ ಮುಖ್ಯಸ್ಥನಾಗಿದ್ದ. ಜಿಲ್ಲೆಗಳಲ್ಲಿ ಮೀರ್ ಅದಿಲ್ ಎಂಬ ನ್ಯಾಯಾಧಿಕಾರಿ ಇರುತ್ತಿದ್ದ. ಪೊಲೀಸ್ ಪದ್ಧತಿಯಿಂದ ಶಿಸ್ತು, ಶಾಂತಿ ಸ್ಥಾಪಿಸಿದ. ನಾಣ್ಯಪದ್ಧತಿ ಸುಧಾರಿಸಿ ಡಾಮ್ ಎಂಬ ನಾಣ್ಯ ಜಾರಿಗೆ ತಂದ. ಇವನನ್ನು ಆಧುನಿಕ ರೂಪಾಯಿಯ ಜನಕ ಎಂದು ಕರೆಯಲಾಗುತ್ತದೆ. ಮುಂದೆ ಇದು ಬ್ರಿಟಿಷ್ ನಾಣ್ಯವ್ಯವಸ್ಥೆಗೆ ಅಸ್ತಿಭಾರವಾ ಯಿತು. ವ್ಯಾಪಾರ ಪ್ರಗತಿಗಾಗಿ ಅನೇಕ ಸುಂಕಗಳನ್ನು ರದ್ದುಪಡಿಸಿದ. ರಸ್ತೆಗಳ ಸುರಕ್ಷತೆ ಕಾಪಾಡಿ ಬಂಗಾಲ-ಪಂಜಾಬ್, ಆಗ್ರಾ-ಮಂಡು-ಮಾರವಾಡ, ಲೊಹೋರ್-ಮುಲ್ತಾನ್ ಹೆದ್ದಾರಿಗಳ ನಿರ್ಮಾಣ ಮಾಡಿ, ಪ್ರಯಾಣಿಕರ ಅನುಕೂಲಕ್ಕೆ ವಿಶ್ರಾಂತಿ ಗೃಹಗಳನ್ನು ಕಟ್ಟಿಸಿದ. ಈತನ ಕಾಲದಲ್ಲಿ ನಿರ್ಮಾಣಗೊಂಡ ರಸ್ತೆಗಳು ಈಗಲೂ ಇವೆ. ಈತ ಕಲೆ, ವಾಸ್ತು ಶಿಲ್ಪಕ್ಷೇತ್ರಗಳಿಗೂ ಗಮನ ಕೊಟ್ಟ. ಅನೇಕ ಭವ್ಯಕಟ್ಟಡಗಳು, ಕೋಟೆಗಳು, ಮಸೀದಿ, ಗೋರಿಗಳನ್ನು ನಿರ್ಮಿಸಿದ. ದೆಹಲಿಯ ಪುರಾನಖಿಲೆ ಇವನ ನಿರ್ಮಾಣವೆಂದು ನಂಬಲಾಗಿದೆ. ಇತಿಹಾಸಕಾರ ಫರ್ಗೂಸನ್ನನ ಪ್ರಕಾರ ಇದೊಂದು ಅಪೂರ್ವ ಕಟ್ಟಡ. ಬಿಹಾರದ ಸಸ್ಸಾರಾಂನಲ್ಲಿರುವ ಇವನ ಗೋರಿ ಆ ಕಾಲದ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.				
	(ಜಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ